ಅವ್ರೇನೂ ಪ್ರಧಾನಿಯೂ ಅಲ್ಲ, ದೇಶದ ಗೌರವಾನ್ವಿತ ರಾಷ್ಟ್ರಪತಿಗಳೂ ಅಲ್ಲ... ಆದರೂ... ಅವ್ರು ಹೊರಟ್ರೂ ಅಂದ್ರೆ, ಊರಿನ ಅಷ್ಟೂ ರಸ್ತೆಗಳು ಝೀರೋ ಟ್ರಾಫಿಕ್ ಆಗೋಗ್ತವೆ. ಸಾಗೋ ಹಾದಿಯುದ್ದಕ್ಕೂ ಯಾರೊಬ್ಬರೂ ಮಧ್ಯಪ್ರವೇಶ ಮಾಡದಂತೆ ನೋ ಎಂಟ್ರೀ ಬೋರ್ಡುಗಳು, ಬ್ಯಾರಿಕೇಡುಗಳು ಹಾಕಲಾಗುತ್ತೆ. ಅವ್ರು ರಾಜಗಾಂಭೀರ್ಯದಿಂದ ನಡ್ಕೊಂಡ್ ಹೋಗ್ತಾ ಇದ್ರೆ, ಅವ್ರನ್ನು ನೋಡೋಕಂತಾನೇ ದಾರಿಯುದ್ದಕ್ಕೂ ಪ್ರಪಂಚದೆಲ್ಲೆಡೆಯಿಂದ ಜನಜಾತ್ರೆಯೇ ನೆರೆದುಬಿಟ್ಟಿರ್ತಾರೆ. ದೇಶದಾದ್ಯಂತ ಹೀಗೊಂದು ಸಂಚಲನ ಸೃಷ್ಟಿಸಿರೋ ಸೆಲೆಬ್ರಿಟಿಯ ಹೆಸರು... ರೆಡ್ ಕ್ರ್ಯಾಬ್ ಅಥವಾ ಕ್ರಿಸ್‌ಮಸ್ ದ್ವೀಪದ ಕೆಂಪು ಏಡಿಗಳು. ಏಡಿಗಳಿಗ್ಯಾಕೆ ಇಷ್ಟೊಂದು ಬಿಲ್ಡಪ್ ಅಂತೀರಾ? ಅದಕ್ಕೂ ಒಂದು ಕಾರಣವಿದೆ. ಅದೇನೆಂದರೆ... ಆಸ್ಟ್ರೇಲಿಯಾದ ಕ್ರಿಸ್‌ಮಸ್ ದ್ವೀಪದಲ್ಲಿ ಮಾತ್ರ ನೋಡಲು ಸಿಗೋ ಈ ಕೆಂಪು ಏಡಿಗಳದ್ದೊಂದು ವಿಚಿತ್ರ ಸಂಪ್ರದಾಯವಿದೆ. ಇವುಗಳು ಇರೋದು ಅರಣ್ಯ ಪ್ರದೇಶಗಳಲ್ಲೇ ಆದರೂ, ಸಂತಾನೋತ್ಪತ್ತಿ ಕಾರ್ಯಗಳು ಮಾತ್ರ ದೂರದಲ್ಲೆಲ್ಲೋ ಇರೋ ಸಮುದ್ರದ ದಡದಲ್ಲೇ ಆಗಬೇಕು ಇವುಗಳಿಗೆ. ಹಾಗಾಗಿ, ಇದೊಂದೇ ಕೆಲಸಕ್ಕಾಗಿ ಒಂದೋ ಎರಡೋ ಅಲ್ಲ, ಅಷ್ಟೂ ಏಡಿಗಳು ಲಕ್ಷಗಟ್ಟಲೆ ಸಂಖ್ಯೆಯಲ್ಲಿ ಒಂದೇ ಸಲಕ್ಕೆ ಸಮುದ್ರದತ್ತ ಗುಳೆ ಹೊರಟುಬಿಡ್ತವೆ.... ಹಾಗಂತ... ಮೂಡ್ ಬಂದಾಗೆಲ್ಲಾ ಎದ್ದು ಕಡಲತಡಿಗೆ ಹೊರಟುಬಿಡ್ತಾವೆ ಅಂದ್ಕೋಬೇಡಿ. ಇದಕ್ಕೂ ಘಳಿಗೆ ಪಂಚಾಂಗ ಎಲ್ಲಾ ನೋಡ್ತಾವೆ ಇವು. ಪ್ರತೀವರ್ಷ... ಮೊದಲ ಮಳೆ ಬಿತ್ತು ಅಂದಾಕ್ಷಣ ಪ್ರಯಾಣ ಶುರುವಾಗುತ್ತೆ. ಶುರುಮಾಡೋದು ಮೊದಲ ಮಳೆಗಾದ್ರೂ ಅದರ ಮುಕ್ತಾಯ ಅಮವಾಸ್ಯೆಯ ಉಬ್ಬರದ ಸಮಯಕ್ಕೇ ಆಗಬೇಕು. ಹಾಗಾಗಿ ಆಕಾಶದಲ್ಲಿ ಚಂದ್ರನೀಗ ಅಮವಾಸ್ಯೆಗೆ ಎಷ್ಟು ದಿನದ ಅಂತರದಲ್ಲಿದಾನೆ ಅಂತ ನೋಡಿ ಅದಕ್ಕೆ ತಕ್ಕಂತೆ ತಮ್ಮ ಸ್ಪೀಡ್ ಹೆಚ್ಚು/ಕಡಿಮೆ ಮಾಡಿಕೊಳ್ತವೆ. ಇನ್ನೇನು ನಾಲ್ಕೈದು ದಿನದಲ್ಲಿ ಅಮವಾಸ್ಯೆ ಅನ್ಸುತ್ತೋ ಹಗಲು ರಾತ್ರಿಯೆನ್ನದೆ ಒಂದೇ ಸಮನೆ ನಡೆಯೋಕ್ ಶುರುಮಾಡ್ತವೆ. ಅಮವಾಸ್ಯೆಗೆ ತುಂಬಾ ದಿನವಿತ್ತೋ, ಆರಾಮಾಗಿ ಅಲ್ಲಲ್ಲಿ ಕ್ಯಾಂಪ್ ಹಾಕಿ ರೆಸ್ಟ್ ಮಾಡುತ್ತಾ ಸಮುದ್ರದತ್ತ ಸಾಗುತ್ತವೆ. ಮೊದಲಿಗೆ ಗಂಡು ಏಡಿಗಳೆಲ್ಲಾ ಈ ಯಾತ್ರೆಯ ನೇತೃತ್ವ ವಹಿಸಿದ್ರೆ, ಅವುಗಳ ಹಿಂದಿಂದೇ ಹೆಜ್ಜೆ ಹಾಕೋದು ಹೆಣ್ಣು ಏಡಿಗಳು. ಮೊದಲು... ಸಮುದ್ರದ ದಡ ತಲುಪೋ ಗಂಡು ಏಡಿ ಸೂಕ್ತ ಜಾಗ ಹುಡುಕಿ ಗೂಡು ಮಾಡಿ ಕಾಯುತ್ತಾ ಕುಳಿತರೆ, ನಂತರ ಬರೋ ಹೆಣ್ಣು ಏಡಿಗಳು ತನಗಿಷ್ಟವಾದ ಮನೆ ಹೊಕ್ಕುತ್ತವೆ...ಅಲ್ಲಿಗೆ ಸಂಸಾರ ಶುರು. ಮೂರು ದಿನದ ಸಂಸಾರವದು. ಅಷ್ಟರಲ್ಲಿ ಮೊಟ್ಟೆಗಳು ರೆಡಿಯಾಗಿ ಬಿಟ್ಟಿರ್ತವೆ. ಅಲ್ಲಿಗೆ ಗಂಡು ಏಡಿಯ ಕಾರ್ಯ ಮುಕ್ತಾಯವಾದಂತೆ. ಮೂರನೇ ದಿನ ಸಮುದ್ರಕ್ಕೊಂದು ಮುಳುಕು ಹಾಕಿ ಗಂಡು ಏಡಿಗಳೆಲ್ಲಾ ಸೀದಾ ಮರಳಿ ಕಾಡಿನತ್ತ ಹೊರಡು ಬಿಡುತ್ತವೆ. ಅಲ್ಲೇ ಉಳಿಯೋ ಹೆಣ್ಣು ಏಡಿಗಳು, ಮುಂದಿನ ಎರಡು ವಾರ ತನ್ನದೇ ಹೊಟ್ಟೆಯ ಚೀಲದೊಳಗೆ ಕಾಪಿಟ್ಟುಕೊಂಡಿರೋ ಬರೋಬ್ಬರಿ ಲಕ್ಷ ಸಂಖ್ಯೆಯ ಮೊಟ್ಟೆಗಳೆಲ್ಲಾ ಲಾರ್ವಾ ರೂಪ ಪಡೆದ ನಂತರ ಅವುಗಳನ್ನು ಉಬ್ಬರದ ಅಲೆಗಳು ಬರುವ ಸಮಯ ನೋಡಿ ನೀರಿಗೆ ಬಿಟ್ಟು ತಾವೂ ಕಾಡಿನತ್ತ ನಡೆದು ಬಿಡುತ್ತವೆ. ಹೀಗೆ ಸಮುದ್ರ ಸೇರೋ ಲಾರ್ವಾ ಮರಿಗಳು ಮುಂದಿನ ಒಂದು ತಿಂಗಳಲ್ಲಿ ಹಲವಾರು ರೂಪ ಪಡೆದು ಕೊನೆಗೂ ಪರಿಪೂರ್ಣ ಏಡಿಗಳಾಗಿ ತಯಾರಾದ ನಂತರ ಇವುಗಳೂ ಮರಳಿ ಕಾಡಿನತ್ತ ಸಾಗಲು ಶುರು ಮಾಡುತ್ತವೆ. ಮುಂದಿನ ಹತ್ತು ದಿನದಲ್ಲಿ ಇವುಗಳೂ ಕಾಡು ಸೇರಿರ್ತವೆ. ಹೀಗೆ ಮುಕ್ತಾಯವಾಗುತ್ತೆ ಆ ವರ್ಷದ ಮಹಾಯಾತ್ರೆಯ ಕಾರ್ಯಕ್ರಮ. ಮೊದಲೆಲ್ಲಾ ಕೋಟಿಗಳ ಸಂಖ್ಯೆಯಲ್ಲಿದ್ದ ಈ ಕೆಂಪು ಏಡಿಗಳು, ನಮ್ಮ ಚಿಗುಳಿ/ಚವುಳಿ/ತಬುರನ್ನು ಹೋಲುವ ಅಲ್ಲಿನ ಹಳದಿ ಇರುವೆಯ ದಾಳಿಗೆ ತತ್ತರಿಸಿ ಇನ್ನೇನು ಸಂಪೂರ್ಣ ನಾಶವೇ ಆದ್ವು ಅನ್ನೋ ಸ್ಥಿತಿಗೆ ಇಳಿದುಬಿಟ್ಟಿದ್ವು. ಜೊತೆಗೇ ವಲಸೆಯ ಸಂದರ್ಭದಲ್ಲಿ ಸೇರಿದಂತೆ ಇತರ ಸಮಯದಲ್ಲೂ ರಸ್ತೆಗಿಳಿಯೋ ಕಾರಣ ವಾಹನಗಳಿಗೆ ಸಿಕ್ಕು ಬಹುತೇಕ ಏಡಿಗಳ ಸಾವುಗಳಾಗ್ತಿತ್ತು. ಹಾಗಾಗಿ ಅಲ್ಲಿನ ಸರ್ಕಾರ, ಈಗ ಇವುಗಳು ಸಾಗೋ ಹಾದಿಯುದ್ದಕ್ಕೂ ರಸ್ತೆಗಿಳಿಯದಂತೆ ಪಕ್ಕದಲ್ಲೇ ಇವುಗಳಿಗಂತಾನೇ ಪ್ರತ್ಯೇಕ ಮಾರ್ಗ ಹಾಗೂ ಅದಕ್ಕೊಂದು ತಡೆಗೋಡೆ ನಿರ್ಮಿಸಿಟ್ಟಿದೆ. ಕೆಲವೊಂದು ಕಡೆ ರಸ್ತೆ ದಾಟಿ ಸಾಗಬೇಕಾದ ಜಾಗದಲ್ಲಿ ಇವುಗಳಿಗಂತಾನೇ ಮೇಲ್ಸೇತುವೆಗಳನ್ನೂ ನಿರ್ಮಿಸಿರೋದೂ ಅಲ್ಲದೆ, ಇವುಗಳು ವಲಸೆಯ ದಿನಾಂಕವನ್ನು ಮೊದಲೇ ಘೋಷಣೆ ಮಾಡಿ, ಆ ಸಮಯದಲ್ಲಿ ಜನರಿಗೆ ರಸ್ತೆಗಳನ್ನೇ ಬಂದ್ ಮಾಡೋ ಮುಖಾಂತರ ಇವುಗಳಿಗೆ ಸಂಪೂರ್ಣ ಸ್ವಾತಂತ್ರ್ಯ ಕಲ್ಪಿಸಿಕೊಡಲಾಗಿದೆ. ಮೊನ್ನೆಯಿಂದ ಇವುಗಳ ಈ ವರ್ಷದ ಮಹಾವಲಸೆಯೂ ಅದ್ದೂರಿಯಾಗಿ ಪ್ರಾರಂಭವಾಗಿದೆ. ಅಲ್ಲಿನ... ಡ್ರಮ್ ಸೈಟ್, ಫ್ಲೈಯಿಂಗ್ ಫಿಶ್ ಕೋವ್, ಈಥೆಲ್ ಹಾಗೂ ಗ್ರೇಥಾ ಬೀಚುಗಳಲ್ಲಿ ಇವುಗಳ ಸಮುದ್ರ ಸಂಸಾರದ ದೃಶ್ಯಗಳು ಯತೇಚ್ಛವಾಗಿ ನೋಡೋಕ್ ಸಿಗ್ತವೆ.
✍🏻 ಸಂದೇಶ್ ಗುಡಿಯಪ್ಪ
No comments:
Post a Comment